Close

ನಮ್ಮ ಬಗ್ಗೆ

ಸುಮಾರು ೧೦ ವರ್ಷಗಳ ಹಿಂದಿನ ಮಾತು. ಅಂತರ್ಜಾಲ ಹಾಗು ಅಂತರ್ಜಾಲ ತಾಣಗಳು ಆಗಿನ್ನೂ ಶೈಶಾವಸ್ಥೆಯಲ್ಲಿದ್ದ ಕಾಲ. ದಿನಪತ್ರಿಕೆಗಳಿಗೂ ಹಾಗು ಮಾಸಪತ್ರಿಕೆಗಳಿಗೂ ನಮ್ಮ ಕವಿತೆಗಳನ್ನು ಕಳುಹಿಸಿ ಯಾವಾಗ ಪ್ರಕಟವಾಗುವುದೋ ಎಂದು ಚಾತಕ ಪಕ್ಷಿಗಳಂತೆ ಕಾಯುವುದು ಪದ್ಧತಿಯಾಗಿದ್ದಾಗ, ಪರಿಚಯದವರೊಬ್ಬರು ಬ್ಲಾಗರ್ ಬಗ್ಗೆ ತಿಳಿಸಿದರು. ನಂತರ webs.com ಮತ್ತು weebly.com ಅಂತರ್ಜಾಲ ತಾಣಗಳ ಪರಿಚಯವಾದವು. ಪ್ರತಿದಿನ ಕಾಲೇಜು ಮುಗಿದೊಡನೆ ಮನೆಗೆ ಬಂದು ಗಣಕಯಂತ್ರದ ಮುಂದೆ ಕುಳಿತುಬಿಡುತ್ತಿದ್ದೆ. ಗಣಕಯಂತ್ರ ಶಾಸ್ತ್ರದ ವಿದ್ಯಾರ್ಥಿಯಾಗಿದ್ದ ನಾನು ನಿರ್ಮಿಸುತ್ತಿದ್ದ ಬ್ಲಾಗ್ ವಿನ್ಯಾಸಗಳು ವಾರಗಳಲ್ಲೇ ಬೇಸರಗೊಳಿಸುತ್ತಿದ್ದವು. ಇದರಿಂದಾಗಿ ನನ್ನ ಯಾವುದೇ ಬ್ಲಾಗ್ ೨-೩ ತಿಂಗಳಿನಾಚೆಗೆ ಮುಂದುವರಿಯಲೇ ಇಲ್ಲ. ಅತ್ತ್ಯುತ್ಕ್ರುಷ್ಟ ವಿನ್ಯಾಸದ ಬ್ಲಾಗನ್ನು ನಿರ್ಮಿಸಿ, ಹಲವಾರು ಲೇಖಕರಿಂದ ರಚಿತವಾದ, ಜನಮೆಚ್ಚುವ ಕವನಗಳು ಅದರಲ್ಲಿ ನಿರಂತರವಾಗಿ ಪ್ರಕಟವಾಗುತ್ತಲಿರಬೇಕೆಂಬ ಹಂಬಲ ಹಾಗೆಯೆ ಉಳಿಯಿತು.

 

ಮೂರು ವರ್ಷಗಳ ಹಿಂದೆ, ಅಂದರೆ ೨೦೧೪ರಲ್ಲಿ ನನ್ನದೇ ಆದ ಮಾಹಿತಿ ತಂತ್ರಜ್ಞಾನ ಸಲಹಾ ಸಂಸ್ಥೆಯಾದ ಆನ್ ಐಡಿಯಾ ಟೆಕ್ ಪ್ರಾರಂಭಿಸಿದ ಮೇಲೆ ನನ್ನ ಕನಸನ್ನು ನನಸು ಮಾಡುವ ಆಸೆ ಮತ್ತೆ ಗರಿಗೆದರಿತು. ಸಾಹಿತಿಗಳಾದ ನನ್ನಿಬ್ಬರು ಅಕ್ಕಂದಿರೊಂದಿಗೂ ಈ ವಿಷಯವಾಗಿ ಚರ್ಚಿಸಿದೆ. ಆದರೆ ಸಮಯದ ಅಭಾವ ಕನಸನ್ನು ಕನಸಾಗಿಯೇ ಉಳಿಸಿತು. ಅದೃಷ್ಟವಶಾತ್ ಈ ವರ್ಷ (೨೦೧೭), ಛಲ ಬಿಡದ ಮಲ್ಲನಂತೆ ಸತತವಾಗಿ ಪ್ರಯತ್ನಿಸಿದುದರ ಫಲವಾಗಿ ನವ್ಯಕಾವ್ಯ ಬ್ಲಾಗಿನ ವಿನ್ಯಾಸಕಾರ್ಯ ಪ್ರಾರಂಭವಾಯಿತು. ಪರಿಪೂರ್ಣತವಾದಿಯಾದ ನಾನು ನನ್ನದೇ ಸಂಸ್ಥೆಯಲ್ಲಿದ್ದ ಪ್ರತಿಭಾವಂತ ವಿನ್ಯಾಸಕಾರರಿಂದ ಹಲವಾರು ವಿನ್ಯಾಸಗಳನ್ನು ಮಾಡಿಸಿದೆ. ದೀರ್ಘವಾದ ಚಿಂತನ-ಮಂಥನ ನಡೆದು, ಕೊನೆಗೆ ಪ್ರಸ್ತುತ ಬ್ಲಾಗಿನ ವಿನ್ಯಾಸವನ್ನು ಆಯ್ಕೆ ಮಾಡಿದೆ.

 

ನಮ್ಮ ನವ್ಯಕಾವ್ಯ ಬ್ಲಾಗನ್ನು ಹುಟ್ಟುಹಾಕುವುದರ ಹಿಂದಿರುವ ಉದ್ದೇಶಗಳು ಮೂರು. ಮೊದಲನೆಯದು, ಇಂದಿನ ಯುವ ಪೀಳಿಗೆಯಲ್ಲಿ ನಶಿಸುತ್ತಿರುವ ಕನ್ನಡ ಸಾಹಿತ್ಯಾಸಕ್ತಿಯನ್ನು ಉಳಿಸಿ, ಬೆಳೆಸುವುದು. ಎರಡನೆಯದು, ಉದಯೋನ್ಮುಖ ಕವಿ-ಕವಯಿತ್ರಿಯರ ನವರಸ ಲೇಪಿತ ಕವನಗಳನ್ನು ಇಲ್ಲಿ ಪ್ರಕಟಿಸುವ ಮೂಲಕ ಅವರನ್ನು ಪ್ರೋತ್ಸಾಹಿಸಿ, ಅವರ ಬೆಳವಣಿಗೆಗೆ ಸೂಕ್ತವಾದ ವೇದಿಕೆಯನ್ನೊದಗಿಸುವುದು. ಮೂರನೆಯದು, ಕನ್ನಡ ಕಾವ್ಯಾಸಕ್ತರ ಬೆಂಬಲದೊಂದಿಗೆ ಕನ್ನಡ ಸಾಹಿತ್ಯ ಸಭಾವೊಂದನ್ನು ರಚಿಸಿ ಕನ್ನಡ ಭಾಷಾಭಿವೃದ್ಧಿಗೆ ಕೈಲಾದ ಸೇವೆಯನ್ನು ಮಾಡುವುದು. ನಿಮ್ಮೆಲ್ಲರ ಆಶೀರ್ವಾದ ಮತ್ತು ಸಹಕಾರದೊಂದಿಗೆ ಈ ಉದ್ದೇಶಗಳು ನೆರವೆರುವುದೆಂಬ ಅದಮ್ಯ ವಿಶ್ವಾಸ ನಮಗಿದೆ.

 

ನವ್ಯಕಾವ್ಯದಲ್ಲಿ ಪ್ರಕಟವಾಗುವ ನವ್ಯ, ನವ್ಯೋತ್ತರ, ಹಾಸ್ಯ, ಅಣುಕು, ಹನಿಗವಿತೆಗಳು ನಿಮ್ಮ ಹೃದಯಗಳನ್ನು ಹಗುರಾಗಿಸಿ, ಮೊಗದಲ್ಲಿ ನಗು ಮೂಡಿಸಿ, ಮನದಲ್ಲಿ ಸಕಾರಾತ್ಮಕ ಮಂಥನ ನಡೆಸಿ ನಿಮ್ಮಲ್ಲಿ ಕ್ಷಣಕ್ಕಾದರೂ ಜೀವನೋಲ್ಲಾಸವನ್ನು ತುಂಬಿದರೆ ನಮ್ಮ ಶ್ರಮ ಸಾರ್ಥಕವಾಯಿತೆಂದು ಆನಂದಿಸುತ್ತೇವೆ.

 

ಜೈ ಕನ್ನಡಾಂಬೆ! ಜೈ ಕರ್ನಾಟಕ!!