Close

August 1, 2017

ನಿಜದ ನೆರಳು ಆರುವ ಮುನ್ನ

ಕಂಬನಿಯಲ್ಲಿ ನಿಜದ ನೆರಳು 
ಬತ್ತಿ ಹೋಗುವ ಮುನ್ನ 
ಉರಿಸಿಬಿಡು ಮಿಥ್ಯವನು 
ಹೊಗೆಯಾಗಲಿ... 
ಇರದಿರಲಿ ಮಿಥ್ಯದ ಜಾಡು 
 
ಭಯದಲ್ಲಿ ನಿಜದ ನೆರಳು 
ಕರಗಿ ಹೋಗುವ ಮುನ್ನ 
ತೊದಲಿಬಿಡು ಸತ್ಯವನು 
ಸುಳ್ಳಿನ ಸುಳುಹುಗಳ 
ತೊಳೆದು-ಕಳೆದು. 
 
ಪ್ರಕೃತಿಯಲ್ಲಿ ನಿಜದ ನೆರಳು 
ಮಾಯವಾಗುವ ಮುನ್ನ 
ಊರಿಬಿಡು ನಿಜದ ಬೇರುಗಳ 
ಬಿತ್ತಿ ಸತ್ಯ ಬೀಜಗಳ 
ಸುಳ್ಳಿನ ಕಳೆಗಳ ಕಿತ್ತೆಸೆದು. 
 
ತನ್ನಿರವೆಂಬುದು ಇಲ್ಲದೆಯೂ 
ನಿತ್ಯ ನಿರಂತರ ಬೆಳೆವ ಮಿಥ್ಯ 
ಉರಿದೇ ತೀರುವುದು 
ನಿಜದ ಧಗ ಧಗ 
ಲಯ ಬದ್ಧ ಉರಿಯಲ್ಲಿ 
ಆರಿ ಹೋಗುವ ಮುನ್ನ 
ನಿಜದ ತಾಪ.
Please follow and like us:

Enjoy this blog? Please spread the word :)