Close

July 10, 2017

ಕಂಗಳ ಕೊಳದ ಚೆಲುವೆ

ಕಂಗಳ ಕೊಳದಲ್ಲಿ

ಬೆಳದಿಂಗಳ ಚೆಲುವೆ

ಚಿತ್ತಾರವ ಬಿಡಿಸಿ

ಮರೆಯಾದಳು ಒಲವೆ

 

ಮೀನಿನ ಹೆಜ್ಜೆ ಹಿಡಿವುದು ಹೇಗೆ

ಕಾಣದ ಅವಳ ಒಲಿಸಲಿ ಹೇಗೆ

ಕಂಗಳ ಕೊಳದಲ್ಲಿ

ನೀರಿಂಗಿ ಬರಡಾಗಿದೆ ಕಣ್ಣು

 

ಅತ್ತು ಅತ್ತು ಕರೆದರೂ

ಅವಳ ಸುಳಿವಿಲ್ಲ

ಅಮಾವಾಸ್ಯೆಯ ಚಂದಿರನಂತೆಯೋ

ಮೋಡಗಳೆಡೆಯಲ್ಲಿ ಅವಿತ ರವಿಯಂತೆಯೋ

ಅಡಗಿ ಕುಳಿತಳು ಅವಳು

ಕರೆಗೆ ಓಗೊಡದೆ

 

ಬರಡಾದ ಕಣ್ಣು – ಬಸವಳಿದ ಜೀವ

ಹರಯ ಮುಪ್ಪಾದರೂ ಕಾಯುತ್ತಲಿದೆ

ಶಬರಿ ರಾಮನ ಕಾದ ಹಾಗೆ

ಬರುವಳೆಂದೋ ಬರದೇ

ಕಾಡುವಳೆಂದೋ!

 

ದೇಹ ನಶ್ವರವಾಗಿ ಮಣ್ಣಾದರೂ

ಮನಸು ಮಾನಿನಿಯಾಗಿ ಅಲೆಯುತಿಹುದು

ಕಂಗಳ ಕೊಳದ ಅವಳ

ಹುಡುಕುತಿಹುದು – ಕಾಯುತಿಹುದು

Please follow and like us:

Enjoy this blog? Please spread the word :)