Close

December 19, 2017

ಊರಿ ನಡೆಯಲಿಲ್ಲ ಹೆಜ್ಜೆ

ನಾ ನಡೆದಿದ್ದೇನೆ ಭ್ರಾಂತನಾಗಿ – ಊಳಿಡುವ
ಮನದ ಜಾಡು ಹಿಡಿದು
ನಡೆದಿದ್ದೇನೆ ಈ ರಾತ್ರಿ
ಕತ್ತಲೆಯ ಸಿರಿ ನೀರವತೆಯಲಿ
ನೆನಪ ಮಗ್ಗಲು ಮುಳ್ಳಿನ ಆವುಗೆ ಧರಿಸಿ |

ನೀನೆಲ್ಲಿರುವೆ, ಎಲ್ಲಿರುವೆ ನೀನು?
ತಿಳಿಯಲು ನಾ ನಡೆದಿದ್ದೇನೆ…..
ಇಬ್ಬರೂ ಸಂಧಿಸಿದ ಆ ಬಿಂದುವಿನಿಂದ ಹೊರಟು
ನಿಶ್ಚಲವಾಗಿ ಬಿದ್ದಿರುವ ರಸ್ತೆ
ಮೈಮೇಲೆ ಅಗಣಿತ ಪಾದಗಳ ಗುರುತು ||

ನಾ ಹುಡುಕುವುದು ವ್ಯರ್ಥ,
ಒಂದೂ ನಿನ್ನ ಪಾದದ ಆಕಾರಕ್ಕೆ ಹೋಲುತ್ತಿಲ್ಲ
ಅನಂತ ಹೆಜ್ಜೆ ಗುರುತುಗಳು ಆ
ದಿಗಂತದವರೆಗೂ ಚಾಚಿ ಕರೆದಿದೆ ನನ್ನ
ಮನಕೆ ಮನವೇ ಭಾರ, ಆಭಾಸ
ಊರಿನಡೆಯಲೇ ಇಲ್ಲ ಹೆಜ್ಜೆ|||

ಕುರುಹುಗಳ ಹಂಗಿಲ್ಲದೇಸವೆಯಿತು ಹಾದಿ
ಕೊನೆಗೂ ನೀ ಸಿಗಲೇ ಇಲ್ಲ
ನಾನಲೆದು ಅಲೆದು ಮಬ್ಬಾದೆ
ಬಯಲಾಗದ ಉತ್ತರ, ಬಣ್ಣ ಪ್ರಶ್ನೆ
ನೀನೆಲ್ಲಿರುವೆ – ಎಲ್ಲಿರುವೆ ನೀನು?

Please follow and like us:

Enjoy this blog? Please spread the word :)